ಬೆಂಗಳೂರು, ಸೆಪ್ಟಂಬರ್ 23: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್ ಬಿಜೆಪಿ ಶಾಸಕ ಮುನಿರತ್ನರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್ 25ಕ್ಕೆ ಮುಂದೂಡಿಕೆ ಮಾಡಿದೆ. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಜನಪ್ರತಿನಿಧಿಇಗಳು ವಿಶೇಷ ನ್ಯಾಯಾಲಯ ಅರ್ಜಿ ವಿಚಾರಣೆ ಮುಂದೂಡಿ ಆದೇಶಿಸಿದೆ.
ಆರ್,ಆರ್ ನಗರದ ಶಾಸಕ ಮುನಿರತ್ನ ವಿರುದ್ಧ ಕೆಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಪೈಕಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಆರೋಪವು ಇತ್ತು. ಸದ್ಯ ಜೈಲಿನಲ್ಲಿರುವ ಮುನಿರತ್ನ ಜಾಮೀನು ಕೋಟಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಜಾಮೀನು ಸಿಗಲಿದೆ ಎಂಬ ಆಸೆ ನಿರಾಸೆಯಾಗಿದ್ದು, ಸದ್ಯಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ದಾಖಲಾಗಿದ್ದ ದೂರಿನನ್ವಯ ಮುನಿರತ್ನ ಅವರನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಪ್ರಕರಣದಿಂದ ಜಾಮೀನು ಕೋರಿ ಶಾಸಕ ಮುನಿರತ್ನ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ವಿಚಾರಣೆ ಸೆಪ್ಟಂಬರ್ 25ಕ್ಕೆ ಮುಂದೂಡಿದೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೊಡಿ; ಎಸ್‌ಪಿಪಿ ವಾದ
ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅವರು ಪ್ರಕರಣ ಸಂಬಂಧ ಸಂತ್ರಸ್ತೆಗೆ ನೋಟಿಸ್ ಜಾರಿ ಮಾಡಬೇಕಿದೆ. ಅಲ್ಲದೇ ಆಕ್ಷೇಪಣೆ ಸಲ್ಲಿಕೆಗೆ ಸಮಯಾವಕಾಶ ಬೇಕಿದೆ. ಆದ್ದರಿಂದ ಜಾಮೀನು ಅರ್ಜಿ ವಿಚಾರಣೆ ಮುಂದೂಡುವಂತೆ ಅವರು ಕೋರಿದರು. ಎಸ್‌ಪಿಪಿ ಮನವಿ ಪುರಸ್ಕರಿಸಿ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.
ಬಿಜೆಪಿ ಶಾಸಕ ಮುನಿರತ್ನ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದ್ದಾರೆ. ಜನಪ್ರತಿನಿಧಿಯಾಗಿ ಮುನಿರತ್ನ ಅವರ ರಾಜಕೀಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಜಾತಿ ನಿಂದನೆ ಕೇಸ್: ಜಾಮೀನು ಮಂಜೂರು ಬಳಿಕ ಬಂಧನ
ಆರ್.ಆರ್ ನಗರ ಕ್ಷೇತ್ರದಲ್ಲಿ ಗುತ್ತಿಗೆದಾರನಿಗೆ ಬಿಲ್ ಪಾಸ್ ಮಾಡಿಕೊಡಲು 30 ಲಕ್ಷ ರೂ. ಕಮಿಷನ್ ಕೇಳಿದ ಆರೋಪ, ಅದೇ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ್ದಲ್ಲದೇ ಜಾತಿ ನಿಂದನೆ ಆರೋಪದಡಿ ಬಂಧಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಮುನಿರತ್ನಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಸಿಕ್ಕಿತ್ತು.
ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಮಹಿಳೆಯೊಬ್ಬರು ತನ್ನ ಮೇಲೆ ಮುನಿರತ್ನ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿ ನೀಡಿದ್ದ ದೂರಿನ ಆಧಾರದಲ್ಲಿ ರಾಮನಗರ ಪೊಲೀಸರು ಜೈಲಿನಿಂದ ಹೊರಬರುತ್ತಿದ್ದಂತೆ ಮುನಿರತ್ನರನ್ನು ಬಂಧಿಸಿದರು. ಈ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇದೇ ಪ್ರಕರಣ ಕೋರ್ಟ್‌ನಲ್ಲಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನಗೆ ಮತ್ತೆ ಜೈಲೇ ಗತಿಯಾಗಿದೆ.
ರಾಜಕೀಯ ಎದುರಾಳಿಗೆ ಏಡ್ಸ್ ರಕ್ತ ಇಂಜೆಕ್ಟ್ ಆರೋಪ
ಅಲ್ಲದೇ ಶಾಸಕ ಮುನಿರತ್ನ ತನ್ನ ರಾಜಕೀಯ ಎದುರಾಳಿ ಕಾಂಗ್ರೆಸ್‌ನ ಡಿಕೆ ಸುರೇಶ್, ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಸುಮಾ ಅವರಿಗೆ ಹಾಗೂ ಸ್ವಪಕ್ಷದ ಒಕ್ಕಲಿಗೆ ಸಮುದಾಯದ ನಾಯಕ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ HIV ಸೋಂಕಿತ ರೋಗಿಗಳ ರಕ್ತವನ್ನು ಇಂಜೆಕ್ಟ್ ಮಾಡಲು ಮುನಿರತ್ನ ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಮುನಿರತ್ನ ಮೂರು ಜನರಿಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡುವ ಕೆಲಸ ವಹಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಜ್ಯ ರಾಜಕಾರಣಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುನಿರತ್ನ ನಡೆಯನ್ನು ಖಂಡಿಸಿದ್ದಾರೆ.