ಬೆಂಗಳೂರು: ನಗರದ ಎಲ್ಲೆಡೆ ಮಂಗಳವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಸುರಿದ ಸತತ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು, ಅತಿ ಹೆಚ್ಚಿನ ವಾಹನ ದಟ್ಟಣೆ ಉಂಟಾಯಿತು.
ಯಲಹಂಕ ಹಾಗೂ ಕೆ.ಆರ್. ಪುರ ಭಾಗಗಳಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿತು. ಯಲಹಂಕದ ಚೌಡೇಶ್ವರಿ ಬಡಾವಣೆ, ವಿದ್ಯಾರಣ್ಯಪುರ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅತಿಹೆಚ್ಚು (8.5 ಸೆಂ.ಮೀ) ಮಳೆಯಾಯಿತು.
ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಮಳೆಯಲ್ಲೇ ಸಾಗಿದರು. ಕಚೇರಿಗಳಿಗೆ ಹೋಗಲು ನಾಗರಿಕರು ಪರದಾಡಿದರು.
ಹವಾಮಾನ ಇಲಾಖೆ ಎರಡು ದಿನ ‘ಆರೆಂಜ್ ಅಲರ್ಟ್’ ಸೂಚನೆ ನೀಡಿರುವುದರಿಂದ ಬೆಂಗಳೂರು ನಗರ ಜಿಲ್ಲೆಯ ಅಂಗನವಾಡಿ, ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅ.16ರಂದು (ಬುಧವಾರ) ರಜೆ ಘೋಷಿಸಲಾಗಿದೆ. 17ರಂದು ವಾಲ್ಮೀಕಿ ಜಯಂತಿಯಾಗಿದ್ದು, ಅಂದು ಸರ್ಕಾರಿ ರಜೆ ಇರುತ್ತದೆ ಎಂದೂ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ತಿಳಿಸಿದ್ದಾರೆ.