ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನದ ‘ಅಗತ್ಯ’ ಹಾಗೂ ಬಂಧನದ ‘ಸಮಯ’ದ (ಲೋಕಸಭಾ ಚುನಾವಣೆಗೆ ಮುನ್ನ) ಕುರಿತು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್, ‘ತನಿಖಾ ಸಂಸ್ಥೆಯು ಪಂಜರದ ಗಿಳಿಯಾಗಬಾರದು’ ಎಂದು ಕಟುವಾಗಿ ಹೇಳಿದೆ. ಕೇಜ್ರಿವಾಲ್ ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ಸಿಬಿಐ ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಅವರು ಸಲ್ಲಿಸಿದ ಇನ್ನೊಂದು ಅರ್ಜಿಯ ಸಂಬಂಧ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿತು. ‘ಈ ತನಿಖಾ ಸಂಸ್ಥೆಯು ಪಂಜರದ ಗಿಳಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಜನರಲ್ಲಿದೆ. ಈ ಭಾವನೆಯನ್ನು ಹೋಗಲಾಡಿಸಬೇಕು’ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು. ಸೀಸರ್ ಪತ್ನಿಯ ಉಪಮೆಯನ್ನು ಉಲ್ಲೇಖಿಸಿದ ಅವರು, ‘ಸಂಸ್ಥೆಯು ಸಂಶಯಾತೀತ ಆಗಿರಬೇಕು’ ಎಂದು ಕಿವಿಮಾತು ಹೇಳಿದರು.
ಈ ಬಂಧನ ಕಾನೂನುಬದ್ಧವಾಗಿದೆ ಹಾಗೂ ಕಾರ್ಯವಿಧಾನದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು. ಕೇಜ್ರಿವಾಲ್ ಅವರನ್ನು ಬಂಧಿಸಿರುವ ಸಿಬಿಐ ಕ್ರಮ ನ್ಯಾಯಯುತವಾಗಿಲ್ಲ ಹಾಗೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಭುಯಾನ್ ಪ್ರತಿಪಾದಿಸಿದರು. ಜಾಮೀನು ಅರ್ಜಿಯ ಸಂಬಂಧ ಸಮ್ಮತಿಯ ಪ್ರತ್ಯೇಕ ತೀರ್ಪು ನೀಡಿರುವ ಅವರು, ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. ಕಲ್ಲಿದ್ದಲು ಹಗರಣದ ವಿಚಾರಣೆಯ (2013ರ ಮೇ ತಿಂಗಳು) ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ‘ಕೇಂದ್ರೀಯ ತನಿಖಾ ಸಂಸ್ಥೆಯು ಯಜಮಾನನ ಧ್ವನಿಯಲ್ಲಿ ಮಾತನಾಡುವ ಪಂಜರದ ಗಿಳಿ ಇದ್ದಂತೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ನ್ಯಾಯಪೀಠವು ತನಿಖಾ ಸಂಸ್ಥೆಯನ್ನು ಮತ್ತೊಮ್ಮೆ ಪಂಜರದ ಗಿಳಿಗೆ ಹೋಲಿಸಿದೆ.
‘ಸಿಬಿಐ ಒಂದು ಪ್ರಮುಖ ತನಿಖಾ ಸಂಸ್ಥೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಂಸ್ಥೆಗೆ ಉನ್ನತ ಸ್ಥಾನ ನೀಡಲಾಗಿದೆ. ಯಾವುದೇ ತನಿಖೆಗಳು ನ್ಯಾಯಯುತವಾಗಿ ನಡೆದಿಲ್ಲ ಅಥವಾ ಪಕ್ಷಪಾತದಿಂದ ಕೂಡಿದೆ ಎಂಬ ಭಾವನೆ ಮೂಡದಂತೆ ನಡೆದುಕೊಳ್ಳುವುದು ಸಂಸ್ಥೆಯ ಹೊಣೆ’ ಎಂದು ಭುಯಾನ್ ಹೇಳಿದರು.
‘ಇತ್ತೀಚೆಗಷ್ಟೇ ಇದೇ ನ್ಯಾಯಾಲಯ ಸಿಬಿಐ ಅನ್ನು ಪಂಜರದ ಗಿಳಿ ಎಂದು ಕರೆದಿತ್ತು. ಹಾಗಾಗಿ, ತಾವು ಪಂಜರದ ಗಿಳಿಗಳಲ್ಲ ಎಂಬುದನ್ನು ಸಿಬಿಐ ಅಧಿಕಾರಿಗಳು ಸಾಬೀತುಪಡಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.
‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಕಠಿಣ ಷರತ್ತುಗಳನ್ನೊಳಗೊಂಡ ಜಾಮೀನು ನೀಡಿರುವಾಗ ಮತ್ತೆ ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಸಂಪೂರ್ಣವಾಗಿ ಅಸಮರ್ಥನೀಯ’ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.