ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ 17 ಮಂದಿ ಆರೋಪಿಗಳು ಪ್ರಸ್ತುತ ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ನನ್ನು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.
ಬಳ್ಳಾರಿ ಜೈಲಿನಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ ಎಂದು ನಟ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ಅವರು ಇತ್ತೀಚೆಗೆ ನಡೆದುಕೊಂಡಿರುವ ರೀತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಫ್ಯಾನ್ಸ್ ಅದಕ್ಕೊಂದು ವಿಶ್ಲೇಷಣೆ ನೀಡುತ್ತಿದ್ದಾರೆ.
ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಅವರ ಸಹೋದರ ದಿನಕರ್ ತೂಗುದೀಪ ಮತ್ತು ವಕೀಲರು ಬಳ್ಳಾರಿ ಜೈಲಿಗೆ ಹೋಗಿದ್ದರು. ಅವರ ಭೇಟಿಗೆ ಸಂಜೆ 4.15ಕ್ಕೆ ದರ್ಶನ್ನನ್ನು ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ಪೊಲೀಸರು ಕರೆ ತಂದಿದ್ದಾರೆ. ವಿಶೇಷ ಭದ್ರತಾ ಕೊಠಡಿಯಿಂದ ಸಂದರ್ಶಕರ ಕೊಠಡಿಗೆ ತೆರಳುತ್ತಿದ್ದ ವೇಳೆ ಕಾರಾಗೃಹದ ಗೇಟಿನ ಕಡೆ ನೋಡುತ್ತಾ ದರ್ಶನ್ ತಮ್ಮ ಎರಡು ಕೈಗಳಲ್ಲಿ ಮಧ್ಯದ ಬೆರಳನ್ನು ತೋರುಸುತ್ತಾ ಸಾಗಿದ್ದಾರೆ. ನಟನ ಈ ನಡೆ ಸದ್ಯ ಭಾರೀ ಚರ್ಚೆಯಾಗುತ್ತಿದೆ. ಅಸಲಿಗೆ ದರ್ಶನ್ ಅವರು ತಮ್ಮ ಪ್ರಸ್ತುತ ಪರಿಸ್ಥಿತಿಯಲ್ಲಿ ಅಸಭ್ಯ ವರ್ತನೆ ತೋರುವ ಮನಸ್ಥಿತಿಯಲ್ಲಿದ್ರಾ ಎನ್ನುವ ಕುತೂಹಲ ಇತ್ತು. ಈ ಮಧ್ಯೆ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಧ್ಯದ ಬೆರಳು ತೋರುತ್ತಾ ಸಾಗಿರುವ ದರ್ಶನ್ ನಡೆಯನ್ನು ಆತನ ಫ್ಯಾನ್ಸ್ ಬೇರೆ ಅರ್ಥದಲ್ಲಿ ಹೇಳುತ್ತಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಯೋಗ, ಧ್ಯಾನ, ಪ್ರಾರ್ಥನೆ ಮೊರೆ ಹೋಗುತ್ತಿದ್ದಾರೆ ಎಂಬ ಹೊಸ ವಿಚಾರ ತಿಳಿಸಲು ಮುಂದಾಗಿದ್ದಾರೆ.
ದರ್ಶನ್ ಮಧ್ಯದ ಬೆರಳು ತೋರಿದ್ದು ವಿಘ್ನಹರ ಮುದ್ರಾ ಸಿಂಬಲ್ ಎಂದು ಬಿಂಬಿಸುತ್ತಿದ್ದಾರೆ. ಇದು ಅಸಭ್ಯ ವರ್ತನೆಯ ಕೈ ಸನ್ನೆ ಅಲ್ಲಾ ಎಂದು ಸಾಕ್ಷಿ ತೋರಿಸುತ್ತಿದ್ದಾರೆ. ದರ್ಶನ್ ಜೈಲಿನಲ್ಲಿ ಯೋಗ, ಧ್ಯಾನ, ಪ್ರಾರ್ಥನೆ ಮೊರೆ ಹೋಗುತ್ತಿದ್ದಾರಂತೆ. ಹೀಗಾಗಿ ಅವರು ವಿಘ್ನಹರ ಮುದ್ರಾ ಸಿಂಬಲ್ ತೋರಿಸುತ್ತಾ ಹೋಗಿದ್ದಾರೆ ಅಷ್ಟೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸದ್ಯ ದರ್ಶನ್ ಮುದ್ರಾ ಸಿಂಬಾಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗನ ಜತೆ ಕುಳಿತು ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದಿರುವ ಫೋಟೋ ಹಾಗೂ ವಿಐಪಿ ಸೆಲ್ನಿಂದಲೇ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ದೃಶ್ಯ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳನ್ನು ಅಮಾನತುಗೊಳಿಸಲು ಆದೇಶಿಸಿ, ನಟನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿತು.