ಮಂಡ್ಯ,ಸೆ.13- ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಭೆಯಿಂದಾಗಿ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ. ನಾಗಮಂಗಲ ಪಟ್ಟಣದಲ್ಲಿನ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಈ ಭಾಗದ ಜನರ ನೆಮದಿ ಕಸಿದಂತಾಗಿದೆ.
ವ್ಯಾಪಾರಿ ಮುಜೀಬ್ ಎಂಬುವರು ಬ್ಯಾಂಕಿನಿಂದ ಸಾಲ ಪಡೆದು ಪಾತ್ರೆ ಅಂಗಡಿ ಇಟ್ಟುಕೊಂಡಿದ್ದು, 25 ಲಕ್ಷ ಸಾಲದ ಹೊರೆ ಅವರ ಮೇಲಿದೆ. ಕಿಡಿಗೇಡಿಗಳ ಕೃತ್ಯದಿಂದಾಗಿ ಅಂಗಡಿಗೆ ಹಾನಿಯಾಗಿದೆ. ಬ್ಯಾಂಕ್‌ನ ಸಾಲ ತೀರಿಸುವುದಾದರೂ ಹೇಗೆ ಎಂದು ಅವರು ಕಣ್ಣಿರು ಹಾಕಿದ್ದಾರೆ.
ಸೌಹಾರ್ದದ ಪ್ರತೀಕವಾಗಿರುವ ಗಣೇಶ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಬಂದು ಪೂಜೆ ಸಲ್ಲಿಸುತ್ತಿದ್ದರು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಸಹ ಹಣ ಕೊಟ್ಟಿದ್ದೇವೆ. ಎಲ್ಲಾ ಶಾಂತಿಯುತವಾಗಿಯೇ ನೆರವೇರಿತ್ತು. ಆದರೆ ವಿಸರ್ಜನೆ ವೇಳೆ ಕೆಲ ಕಿಡಿಗೇಡಿಗಳ ಕೃತ್ಯದಿಂದಾಗಿ ನಾವೆಲ್ಲ ಬೀದಿಗೆ ಬಂದಿದ್ದೇವೆ ಎಂದು ನೊಂದು ಹಲವು ವ್ಯಾಪಾರಸ್ಥರು ಹೇಳಿದ್ದಾರೆ. ಮತ್ತೊಬ್ಬರು ಬಟ್ಟೆ ಅಂಗಡಿ ಮಾಲೀಕ ಭೀಮರಾಜ್ ಎಂಬುವರೂ ಘಟನೆಗೆ ಬೇಸರ ವ್ಯಕ್ತಪಡಿಸಿ, ಮೊನ್ನೆ ರಾತ್ರಿ ಬಟ್ಟೆ ಶೋ ರೂಮ್‌ಗೆ ಬೆಂಕಿ ಹಚ್ಚುತ್ತಿದ್ದಾರೆಂಬ ವಿಷಯ ತಿಳಿದು ಸ್ಥಳಕ್ಕೆ ಬಂದೆ. ಆ ವೇಳೆ ಕೆಲ ಯುವಕರು ಬಾಟಲಿ, ಲಾಂಗ್ ಹಿಡಿದು ದಾಳಿಗೆ ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಸಹ ಪ್ರಾಣ ಭಯದಿಂದ ಓಡುತ್ತಿದ್ದರು. ಆ ವೇಳೆ ಪ್ರಾಣ ಉಳಿದರೆ ಸಾಕೆಂದು ನಾನು ಕೂಡ ಓಡಿದೆ. ನನ್ನ ಬಟ್ಟೆ ಅಂಗಡಿ ಸುಟ್ಟು ಕರಲಾಗಿದೆ. ನನ್ನೊಂದಿಗೆ ಬೈಕ್ ಶೋರೂಮ್, ಚಪ್ಪಲಿ ಅಂಗಡಿ, ಟೈರ್ ಅಂಗಡಿ, ಟೈಲರ್ ಅಂಗಡಿ ಸೇರಿ 20ಕ್ಕೂ ಹೆಚ್ಚು ಮಳಿಗೆಗಳ ವ್ಯಾಪಾರಿಗಳುಉ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದಂತಹ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಕಣ್ಣೀರು ಹಾಕಿದರು. ಅಲ್ಲದೆ ರಸ್ತೆಬದಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್‌ಗಳು, ಸ್ಕೂಟರ್‌ಗಳು ಸಹ ಬೆಂಕಿಯಿಂದಾಗಿ ಹಾನಿಯಾಗಿವೆ.