ತುಂಗಭದ್ರಾ ಜಲಾಶಯದಿಂದ ಮೂರನೇ ಬಾರಿಗೆ ನೀರು ಹೊರಕ್ಕೆ

ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈಗಾಗಲೇ ಭರ್ತಿಯಾಗಿಯೇ ಇದ್ದ ಅಣೆಕಟ್ಟೆಯಿಂದ 18 ಕ್ರಸ್ಟ್‌ಗೇಟ್‌ ತೆರೆದು ನೀರನ್ನು ಹೊರಬಿಡಲಾಗಿದೆ.

ಈ ವರ್ಷ ಇದೀಗ ಮೂರನೇ ಬಾರಿಗೆ ನೀರನ್ನು ಕ್ರಸ್ಟ್‌ಗೇಟ್ ತೆರೆದು ಸತತವಾಗಿ ಹೊರಬಿಡುವ ಕೆಲಸ ನಡೆದಿದೆ. ಜುಲೈ 22ರಿಂದ ಆಗಸ್ಟ್ 10ರವರೆಗೆ, ಸೆಪ್ಟೆಂಬರ್‌ 4ರಿಂದ 17ರವರೆಗೆ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗಿತ್ತು. ಈ ನಡುವೆ ಆಗಸ್ಟ್‌ 10ರಂದು 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ ನೀರಲ್ಲಿ ಕೊಚ್ಚಿ ಹೋಗಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆದು ಮತ್ತೆ ಜಲಾಶಯ ಭರ್ತಿಯಾಗುವಂತೆ ಮಾಡಲಾಗಿತ್ತು. ಈ ವರ್ಷ 200 ಟಿಎಂಸಿ ಅಡಿಗೂ ಹೆಚ್ಚು ನೀರು ನದಿಗೆ ಹರಿದು ಹೋಗಿದೆ. 2022ರಲ್ಲಿ 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿತ್ತು.

ಸದ್ಯ ಜಲಾಶಯಕ್ಕೆ 50,146 ಕ್ಯುಸೆಕ್‌ನಷ್ಟು ಒಳಹರಿವು ಇದ್ದು, 49,966 ಕ್ಯುಸೆಕ್‌ನಷ್ಟು ಹೊರಹರಿವು ಇದೆ. ಉತ್ತಮ ಮಳೆಯ ಕಾರಣ ಈ ಬಾರಿ ತುಂಗಭದ್ರಾ ಕಾಲುವೆಗಳ ವ್ಯಾಪ್ತಿಯ ಸುಮಾರು 15 ಲಕ್ಷ ಎಕರೆ ಪ್ರದೇಶದಲ್ಲಿ ಎರಡನೇ ಬೆಳೆಗೂ ನೀರು ಸಿಗುವುದು ಈಗಾಗಲೇ ದೃಢಪಟ್ಟಿದೆ.

See also  ಕೇವಲ ಪತ್ರದ ಆಧಾರದಲ್ಲಿ CBI ತನಿಖೆಗೆ ಆದೇಶಿಸಲು ಹೈಕೋರ್ಟ್‌ಗೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
0 0 votes
Article Rating
Subscribe
Notify of
guest
0 Comments
Inline Feedbacks
View all comments