ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ವಿಜಯದಶಮಿ ದಿನದಂದು ಜಂಬೂಸವಾರಿಗೆ ಅದ್ಧೂರಿ ಚಾಲನೆ ದೊರೆಯಿತು. ನಾಡದೇವಿ ಚಾಮುಂಡೇಶ್ವರಿ ಸಹಿತವಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯ 5ನೇ ಬಾರಿಗೆ ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಐತಿಹಾಸಿಕ ಕ್ಷಣವನ್ನು ಕೋಟ್ಯಾಂತರ ಜನರು ಕಣ್ತುಂಬಿಕೊಂಡರು.
ಶನಿವಾರ ಮಧ್ಯಾಹ್ನ 1.41 ರಿಂದ 2.10ರ ನಡುವೆಯ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿತು. ಬಳಿಕ ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ, ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಜೊತೆಗಿದ್ದರು. ಜಂಬೂಸವಾರಿಯ ಚಾಮುಂಡೇಶ್ವರಿ ದೇವಿ ಪುಷ್ಪಾರ್ಚನೆ ವೇಳೆ ಸಂಸದ ಹಾಗೂ ರಾಜವಂಶಸ್ಥ ಯದುವೀರ ಒಡೆಯರ್ ಗೈರಾಗಿದ್ದರು.