‘ಪ್ರಥಮ ಪ್ರಜೆ’ ಇಲ್ಲದೆ ನಡೆಯಲಿದೆ ಜಂಬೂಸವಾರಿ!


ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗಾಗಲೇ ಜನಮನ ಸೂರೆಗೊಂಡಿವೆ. ದಸರಾ ಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣ ಗಣನೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮೈಸೂರಿನ ಪ್ರಥಮ ಪ್ರಜೆ ಮೇಯರ್ ಇಲ್ಲದೆ ಜಂಬೂ ಸವಾರಿ ನಡೆಯಲಿದೆ.

ಅಕ್ಟೋಬರ್ 12ರಂದು ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸಾಹಿತಿ ಡಾ. ಹಂಪನಾ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿ ಜಂಬೂ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಂಜೂ ಸವಾರಿ ಮೆರವಣಿಗೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಯಾದ ಮಹಾನಗರ ಪಾಲಿಕೆಯ ಮಹಾಪೌರರರಿಗೆ ಕುದುರೆ ಸವಾರಿ ಮಾಡುವ ಭಾಗ್ಯ ದೊರೆಯುತ್ತದೆ. ಆದರೆ, ಈ ಬಾರಿ ಅಂತಹ ಭಾಗ್ಯ ಇಲ್ಲವಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಅವಧಿ ಮುಗಿದು ಬರೋಬ್ಬರಿ 11 ತಿಂಗಳು ಕಳೆದರೂ ರಾಜ್ಯ ಸರಕಾರ ಚುನಾವಣೆ ನಡೆಸದ ಪರಿಣಾಮ ಮೈಸೂರಿನ ಪ್ರಥಮ ಪ್ರಜೆ ಆಯ್ಕೆಯಾಗಿಲ್ಲ. ಹೀಗಾಗಿ ಕುದುರೆ ಸವಾರಿ ಭಾಗ್ಯ, ಗಜಪಡೆಗೆ ಪುಷ್ಪಾರ್ಚನೆ ಮಾಡುವ ಅವಕಾಶ ಇಲ್ಲದಂತಾಗಿದೆ.

ಮೇಯರ್ ಆಗಿದ್ದವರು ಪುಷ್ಪಾರ್ಚನೆ ಮಾಡಿ ಕುದುರೆ ಸವಾರಿ ಮೂಲಕ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸ್ತೋಮಕ್ಕೆ ಕೈ ಬೀಸುತ್ತ ಸಾಗುತ್ತಿದ್ದರು. ಆದರೆ ಈ ಬಾರಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಪ್ರಾದೇಶಿಕ ಆಯುಕ್ತರೇ ಆಡಳಿತಾಧಿಕಾರಿಯಾಗಿದ್ದು, ಮೇಯರ್ ಇಲ್ಲದೆ ದಸರಾ ನಡೆಯುವಂತಾಗಿದೆ.

1983ರಲ್ಲಿ ಪಾಲಿಕೆ ಅಸ್ತಿತ್ವಕ್ಕೆ ಬಂದಾಗ ಮೊದಲ ಮೇಯರ್ ಆಗಿದ್ದ ವಿಶ್ವನಾಥ್ ಅವರು ತಾವಾಗಿಯೇ ಕುದುರೆ ಸವಾರಿಯಿಂದ ಹಿಂದೆ ಸರಿದಿದ್ದರು. †1999ರಲ್ಲಿ ಮೇಯರ್ ಆಗಿದ್ದ ಶ್ರೀಕಂಠಯ್ಯ ಅವರು ಸಹ ಕುದುರೆಯನ್ನೇರದೆ ಎಲ್ಲಾ ಪಾಲಿಕೆ ಸದಸ್ಯರೊಂದಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಂದ ಎಲ್ಲ ಮೇಯರ್‌ಗಳು ಅಂಬಾರಿ ಹೊತ್ತ ಗಜಪಡೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕುದುರೆ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಕೋವಿಡ್ ಸಂದರ್ಭದಲ್ಲಿ ಸರಳ ದಸರಾ ನಡೆದ ಹಿನ್ನೆಲೆ ಅರಮನೆಯೊಳಗೆ ಜಂಬೂ ಸವಾರಿ ಮೆರವಣಿಗೆ ನಡೆದ ಹಿನ್ನೆಲೆಯಲ್ಲಿ ಮೇಯರ್ ಆಗಿದ್ದ ಸುನಂದಾ ಪಾಲನೇತ್ರ ಮತ್ತು ತಸ್ನಿಂ ಅವರಿಗೆ ಪುಷ್ಪಾರ್ಚನೆ ಅವಕಾಶ ಸಿಕ್ಕಿತಾದರೂ ಕುದುರೆ ಸವಾರಿಗೆ ಅವಕಾಶ ಸಿಗಲಿಲ್ಲ.

See also  ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು
0 0 votes
Article Rating
Subscribe
Notify of
guest
0 Comments
Inline Feedbacks
View all comments