ಬೆಂಗಳೂರು: ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸಲು ಬಿಬಿಎಂಪಿ ‘ನಾಯಿಗಳಿಗಾಗಿ ಉತ್ಸವ’ವನ್ನು (ಕುಕುರ್ ತಿಹಾರ್) ಅ.17ರಂದು ಆಯೋಜಿಸಿದೆ.
‘ಸಮಾಜದಲ್ಲಿ ನಾಯಿಗಳ ಕಡಿತ ಹಾಗೂ ದಾಳಿಯ ಭಯದಿಂದ ಅವುಗಳ ಮೇಲೆ ನಕಾರಾತ್ಮಕ ಭಾವನೆಯೇ ಹೆಚ್ಚಾಗುತ್ತಿದೆ. ಆದರೆ, ನಾಯಿಗಳು ಬಹಳ ನಿಷ್ಠಾವಂತ, ವಿಧೇಯ, ರಕ್ಷಣಾತ್ಮಕ ಹಾಗೂ ಭಾವನಾತ್ಮಕ ಬೆಂಬಲ ನೀಡುವಂತ ಪ್ರಾಣಿಯೂ ಆಗಿದೆ’ ಎಂದು ಆರೋಗ್ಯ, ನೈರ್ಮಲ್ಯ ಮತ್ತು ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
‘ಪ್ರಾಣಿಗಳೊಂದಿಗಿನ ಸಂಘರ್ಷ ನಿರ್ವಹಣೆ, ರೇಬೀಸ್ ಕಾಯಿಲೆ ತಡೆಗಟ್ಟುವ ಕ್ರಮಗಳನ್ನು ಪ್ರತಿಪಾದಿಸುತ್ತಿದ್ದರೂ, ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.
‘ಪ್ರಾಣಿಗಳ ಜನನ ನಿಯಂತ್ರಣ ಮತ್ತು ಲಸಿಕೆಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾದ ವಿಷಯ’ ಎಂದು ಹೇಳಿದ್ದಾರೆ.
ಸಹವರ್ತಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗವು ಮುಂಬರುವ ದಿನಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿ ವಾರ್ಡ್ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ಗಳನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.