ಕೊಪ್ಪಳ: ‘ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಚಲಿತರಾಗಬೇಕಿಲ್ಲ. ಇದರಲ್ಲಿ ಅವರಿಗೆ ಶಿಕ್ಷೆಯಾಗುವ ಪ್ರಶ್ನೆಯೇ ಇಲ್ಲ’ ಎಂದು ಸಿ.ಎಂ. ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ಬಸಾಪುರದಲ್ಲಿರುವ ಖಾಸಗಿ ಏರ್ಸ್ಟ್ರಿಪ್ಟ್ನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಡಾ ಹಗರಣದಲ್ಲಿ ವಿನಾಕಾರಣ ಮುಖ್ಯಮಂತ್ರಿಯವರ ಹೆಸರು ತರಲಾಗಿದೆ.
ಇದು ರಾಜಕೀಯ ಆಟವಾಗಿದ್ದು ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ನ್ಯಾಯಾಲಯ ಪ್ರಾಥಮಿಕ ತನಿಖೆಗೆ ಮಾತ್ರ ಅನುಮತಿ ಕೊಟ್ಟಿದೆ. ನನ್ನ ಪ್ರಕಾರ ಸಿ.ಎಂ. ರಾಜೀನಾಮೆ ಕೊಡದೇ ಮುಂದಿನ ಮೂರೂವರೆ ವರ್ಷ ಮುಂದುವರಿಯಬೇಕು’ ಎಂದರು.
ನೀವೂ ಸಿ.ಎಂ. ಸ್ಥಾನದ ಆಕಾಂಕ್ಷಿಯಲ್ಲವೇ ಎನ್ನುವ ಪ್ರಶ್ನೆಗೆ ‘ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ನಾನು ಹೇಳಿದ್ದೇನೆ. ಒಂದು ವೇಳೆ ಕೊಟ್ಟರೆ ಲಿಂಗಾಯತ ಸಮುದಾಯದ ನಾಯಕನಾಗಿರುವ ನಾನೂ ಆಕಾಂಕ್ಷಿಯಾಗಿದ್ದೇನೆ. ಅವರಿಗೆ ಮುಖ್ಯಮಂತ್ರಿ ಹುದ್ದೆ ತೊರೆಯುವಂತೆ ಯಾರೂ ಹೇಳಿಲ್ಲ’ ಎಂದರು.