ಬೆಂಗಳೂರು, ಅಕ್ಟೋಬರ್ 03: ಬೆಂಗಳೂರಿನ ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಬೆದರಿಕೆ, ಲೈಂಗಿಕ ದೌರ್ಜನ್ಯ, ಹನಿಟ್ರ್ಯಾಪ್ ಆರೋಪದ ಮೇಲೆ ದೂರು ದಾಖಲಾಗಿವೆ. ಶಾಸಕರು ಮಹಿಳೆಯನ್ನು ಹನಿಟ್ರ್ಯಾಪ್‌ಗೆ ಬಳಸಿದ್ದಾರೆಂಬ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಶಾಸಕರ ಮೇಲೆ ದೂರು ನೀಡಿದ್ದ ದೂರುದಾರೆ ಸಂತ್ರಸ್ತೆಯೇ ಇದೀಗ ತನಿಖಾಧಿಕಾರಿಗಳ ಮುಂದೆ ಕೆಲವು ರಾಜಕಾರಣಿಗಳ ಬಂಡವಾಳ ಬಿಚ್ಚಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಶಾಸಕ ಮುನಿರತ್ನ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ 37 ವರ್ಷದ ಮಹಿಳೆ ಇದೀಗ SIT ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ರಾಜ್ಯ ಅಪರಾಧ ತನಿಖಾ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆದ ಮಾಹಿತಿ ಲಭ್ಯವಾಗಿದೆ.
ವಿಚಾರಣೆ ವೇಳೆ ಮಹಿಳೆಯು ಕೆಲವು ಮಹತ್ವದ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಶೇಷ ತನಿಖಾಧಿಕಾರಿಗಳ ಮುಂದೆ ಕೆಲವು ರಾಜಕಾರಣಗಳ ಸೆಕ್ಸ್ ವಿಡಿಯೋ ಹಾಗೂ ಫೋಟೋಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ, ಹನಿಟ್ರ್ಯಾಪ್ ಮಾಡಲು ನನ್ನನ್ನು ಬಳಸಿಕೊಳ್ಳಲಾಗಿದೆ ಎಂದು ವಿಚಾರಣೆ ವೇಳೆ ಮತ್ತೆ ತಿಳಿಸಿದ್ದಾರೆ.
ನನ್ನ ಮೇಲೆ ಲೈಂಗಿಕ ದಾಳಿ ನಡೆಸಿದ ಶಾಸಕ ಮುನಿರತ್ನ ನನ್ನ ಬಳಸಿಕೊಂಡು ಕೆಲವು ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದರು ಎಂದು ಸಂತ್ರಸ್ತೆ ಎಸ್‌ಐಟಿ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ ಸಂಬಂಧಿಸಿದ ಸೆಕ್ಸ ವಿಡಿಯೋ, ಫೋಟೋಗಳನ್ನು ಸಾಕ್ಷ್ಯವಾಗಿ ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.