ಬೆಂಗಳೂರು, ಸೆಪ್ಟಂಬರ್ 30: ಚುನಾವಣಾ ಬಾಂಡ್ ಮೂಲಕ ಬಿಜೆಪಿ ಸುಲಿಗೆ ಮಾಡಿದೆ. ಇದೊಂದು ದೊಡ್ಡ ಆರ್ಥಿಕ ಹಗರಣ ಎಂದು ಕರೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾದ ದೂರಿನ ತನಿಖೆಯನ್ನು ಇಂದು ಸಿಐಡಿ, ಇಲ್ಲವೇ ಎಸ್‌ಐಟಿಗೆ ವಹಿಸುವ ಸಾಧ್ಯತೆ ಇದೆ. ಹೌದು, 8000 ಕೋಟಿ ಚುನಾವಣಾ ಬಾಂಡ್ ಹಗರಣ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ, ರಾಜ್ಯ ಬಿಜೆಪಿ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಬೃಹತ್ ಹಗರಣವಾಗಿದ್ದರಿಂದ ಪೊಲೀಸ್ ಠಾಣೆ ಮಟ್ಟದಲ್ಲಿ ತನಿಖೆ ಬದಲಾಗಿ ಎಸ್‌ಐಟಿ, ಸಿಐಡಿಗೆ ವಹಿಸಬೇಕೆಂಬ ಆಗ್ರಹ ಜೋರಾಗಿದೆ. ಆದ್ದರಿಂದ ಹಿರಿಯ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ವಿಶೇಷ ತನಿಖೆ ತಂಡ (ಎಸ್‌ಐಟಿ) ರಚನೆ ಮಾಡಬೇಕು. ಇಲ್ಲವೇ ಸಿಐಡಿಗೆ ತನಿಖೆಗೆ ಪ್ರಕರಣ ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಕುರಿತು ಇಂದು ಸೋಮವಾರ (ಸೆ.30) ಅಧಿಕೃತ ಆದೇಶ ಹೊರ ಬೀಳಲಿದೆ.
ಇದರೊಂದಿಗೆ ಮುಡಾ ಹಗರಣಕ್ಕೆ ಆದೇಶಿಸಿದ ಬಳಿಕ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಬಾಂಡ್ ಕುರಿತು ಪ್ರಕರಣ ದಾಖಲಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ತನಿಖಾ ಸಂಸ್ಥೆಗಳ ಜಂಗಿ ಕುಸ್ತಿ ಶುರುವಾಗಿದೆ.