ಬೆಂಗಳೂರು, ಸೆಪ್ಟೆಂಬರ್ 30: ನೈತಿಕತೆ ಬಗ್ಗೆ ಮಾತನಾಡುವ ನಿಮಗೆ ನೈತಿಕತೆ ಇದ್ದರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಷದಿಂದ ಆಚೆ ಹಾಕಿ. ನಿಮಗೆ ಆ ದಮ್ಮು ತಾಕತ್ತು ಇದೆಯಾ? ನಿರ್ಮಲಾ ಸೀತಾರಾಮನ್, ಅಶೋಕ್, ಮುನಿರತ್ನ ಅವರನ್ನು ವಜಾಗೊಳಿಸಿ. ಆಮೇಲೆ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಡಿ.ಕೆ.ಶಿವಕುಮಾರ್ ರಾಜೀನಾಮೆ ಕೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಮ್ಮ ರಾಜ್ಯದಲ್ಲಿ ಬಿಜೆಪಿಯವರು ಸಂಪೂರ್ಣವಾದ ಬಿಕ್ಕಟ್ಟಿನಲ್ಲಿದ್ದಾರೆ. ಆ ಪಕ್ಷದ ಒಳಜಗಳ, ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತಿದ್ದೇವೆ.
ನಮ್ಮ ಹೋರಾಟ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರಿಗೆ ದೊಡ್ಡ ಮುಜುಗರವಾಗಿದೆ. ನಮ್ಮ ಹೋರಾಟದಿಂದ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಮಾಡಿದವು. ತೆರಿಗೆ, ಬರ ಪರಿಹಾರ, ನೀರಾವರಿ ಯೋಜನೆ ಅನುದಾನ ಆಗ್ರಹಿಸುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರು ಪ್ರತಿ ಬಾರಿ ತಮ್ಮದೇ ಆದ ಕಾರ್ಯಾಚರಣೆ ಹೊಂದಿದ್ದಾರೆ.
ಅವರು ಮೊದಲು ಐಟಿ, ಸಿಬಿಐ, ಇಡಿ ಕಳಿಸುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಬೆದರಿಸುತ್ತಾರೆ. ಇದಕ್ಕೆ ಮಣಿಯದಿದ್ದರೆ, ರಾಜ್ಯಪಾಲರ ಕಚೇರಿಯನ್ನು ಪಕ್ಷದ ಕಚೇರಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದನ್ನು ರಾಷ್ಟ್ರಾದ್ಯಂತ ನೋಡುತ್ತಿದ್ದೇವೆ. ಈಗ ಕರ್ನಾಟಕದಲ್ಲೂ ಇದೇ ಡ್ರಾಮಾ ನಡೆಯುತ್ತಿದೆ. ಇವರ ವಿಧಾನ ಬ್ಲಾಕ್ ಮೇಲ್. ಕೇವಲ ಇದು ವಿರೋಧ ಪಕ್ಷಕ್ಕೆ ಮಾತ್ರವಲ್ಲ, ಹಣ ಲೂಟಿ ಮಾಡಲೂ ಇದೇ ವಿಧಾನ ಅನುಸರಿಸುತ್ತಾರೆ. ಬ್ಲಾಕ್ ಮೇಲ್ ಮಾಡಿ ಮಾನಸಿಕವಾಗಿ ಕುಗ್ಗಿಸಿ ಇವರ ಪಕ್ಷ ಸೇರಬೇಕು ಅಥವಾ ಹಣ ನೀಡಬೇಕು.
ಚುನಾವಣಾ ಬಾಂಡ್ ವಿಚಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 2017ರಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಪಕ್ಷಗಳ ದೇಣಿಗೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಎಸ್ ಬಿಐ ಮೂಲಕ ಬಾಂಡ್ ತರಬೇಕು. ಆದರೆ ಇದನ್ನು ಯಾರು ಯಾರಿಗೆ ತರಬೇಕು ಎಂಬುದನ್ನು ಗೌಪ್ಯವಾಗಿ ಇಡಲಾಗುವುದು. ಈ ವಿಚಾರ ರಾಜ್ಯಸಭೆಯಲ್ಲಿ ಚರ್ಚೆ ಆಗಬಾರದು ಎಂದು ಇದನ್ನು ಹಣಕಾಸು ಮಸೂದೆ ಮೂಲಕ ತರುತ್ತಾರೆ. ಆದರೂ ರಾಜ್ಯಸಭೆಯಲ್ಲಿ ನಾವು ಇದನ್ನು ವಿರೋಧಿಸಿ ಕೆಲವು ಮಾರ್ಪಾಡಿಗೆ ಸೂಚನೆ ನೀಡಿದ್ದೆವು.
ಈ ಚುನಾವಣಾ ಬಾಂಡ್ ಕೇವಲ ಎಸ್ ಬಿಐ ಬ್ಯಾಂಕ್ ವ್ಯಾಪ್ತಿಯಲ್ಲಿದ್ದು, ಈ ಬ್ಯಾಂಕ್ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ನಿರ್ಮಲಾ ಸೀತಾರಾಮನ್ ಅವರ ಅಡಿಯಲ್ಲಿದೆ. 15-02-2024ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ. ಇದು ಅಸಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇದರಿಂದ ನಾಗರೀಕರಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಕೂಡಲೇ ಸರ್ಕಾರ ಹಾಗೂ ಎಸ್ ಬಿಐ ಯಾರು ಈ ಬಾಂಡ್ ಖರೀದಿಸಿ, ಯಾರಿಗೆ ನೀಡಿದ್ದಾರೆ ಎಂದು ಬಹಿರಂಗಪಡಿಸಲು ತಿಳಿಸುತ್ತದೆ.
04-03-2024ರಂದು ಎಸ್ ಬಿಐ ಮಾಹಿತಿ ಒದಗಿಸಲು ಕಾಲಾವಕಾಶ ನೀಡುವಂತೆ ಕೋರುತ್ತದೆ. ಡಿಜಿಟಲ್ ಇಂಡಿಯಾ ಎಂದು ಹೇಳುವ ಕಾಲದಲ್ಲಿ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಮಾರ್ಚ್ 12ರಂದು ಬಾಂಡ್ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡುತ್ತಾರೆ. ಮಾರ್ಚ್ 15ರಂದು ಅದು ಪ್ರಕಟವಾಗುತ್ತದೆ. ನಂತರ ಬಾಂಡ್ ಮೂಲಕ 12 ಸಾವಿರ ಕೋಟಿ ರಾಜಕೀಯ ಪಕ್ಷಗಳಿಗೆ ಸೇರಿದ್ದು, ಇದರಲ್ಲಿ ಸಿಂಹಪಾಲು ಬಿಜೆಪಿಗೆ ಸಿಕ್ಕಿದೆ. ಇನ್ನು ಹೆಚ್ಚಿನ ಬಾಂಡ್ ಗಳು 2019ರ ಚುನಾವಣೆ ಸಮಯದಲ್ಲಿ. ಎಸ್ ಬಿಐ ನೀಡಿರುವ ದಾಖಲೆಯಲ್ಲಿ 2500 ಕೋಟಿಯಷ್ಟು ದೇಣಿಗೆ ಮಾಹಿತಿ ಇಲ್ಲವಾಗಿದೆ. 2018ರಿಂದ ನೀಡುವ ಬದಲು, 2019ರಿಂದ ಮಾಹಿತಿ ನೀಡಿದ್ದಾರೆ.
ಅಗ್ರ 30 ದೇಣಿಗೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚು ದೇಣಿಗೆದಾರರು ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾಗಿದ್ದಾರೆ. ಇವರಿಂದ ಒಟ್ಟು 4 ಸಾವಿರ ಕೋಟಿ ಹಣ ಸಂಗ್ರಹಿಸಲಾಗಿದೆ. ಫ್ಯೋಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಕಂಪನಿ 1300 ಕೋಟಿ ನೀಡಿದೆ. ಅವರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳುವಾಗ ಈ ಬಾಂಡ್ ಖರೀದಿ ಮಾಡಲಾಗಿದೆ.
ಕಂಪನಿಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಚುನಾವಣಾ ಬಾಂಡ್ ಖರೀದಿಯಾಗುತ್ತವೆ. ಬಾಂಡ್ ಖರೀದಿಯಾದ ಬೆನ್ನಲ್ಲೇ ಈ ಪ್ರಕರಣಗಳು ತಣ್ಣಗಾಗುತ್ತವೆ. ಇದರ ವಿರುದ್ಧ ನಮ್ಮ ರಾಜ್ಯದ ಜನಾಧಿಕಾರ ಸಂಘರ್ಷ ಪರಿಷತ್ ಎಂಬ ಎನ್ ಜಿ ಓ ನ್ಯಾಯಾಲಯ ಮೆಟ್ಟಿಲೇರಿ ಈ ಸುಲಿಗೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸುತ್ತದೆ.
ಈ ಪ್ರಕರಣದಲ್ಲಿ ಕೇಂದ್ರ ಸಚಿವೆ, ಇಡಿ ಅಧಿಕಾರಿಗಳು, ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಅವಕಾಶ ನೀಡಿದೆ. ನ್ಯಾಯಾಲಯ ಆದೇಶದಲ್ಲಿ ಚುನಾವಣಾ ಬಾಂಡ್ ಅಸಂವಿಧಾನಿಕವಾಗಿದ್ದು, ಇದರಲ್ಲಿ ಆರೋಪಿಯಾಗಿರುವವರು ಕ್ರಿಮಿನಲ್ ಆರೋಪಿಗಳಾಗಿದ್ದು, ಇವರ ವಿರುದ್ಧ ಸೂಕ್ತ ತನಿಖೆ ನಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ