ರಾಯಚೂರು, ಸೆಪ್ಟೆಂಬರ್ 05: ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಸಮರ್ಥ್(7) ಹಾಗೂ ಶ್ರೀಕಾಂತ್(12) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಶಾಲೆಗೆ ಹೊರಟಿದ್ದ ವೇಳೆ ಮಾನ್ವಿ ಹೊರವಲಯದಲ್ಲಿ ಶಾಲಾ ಬಸ್ಗೆ ಮಾನ್ವಿಯಿಂದ ರಾಯಚೂರು ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ 32 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸದ್ಯ ಗಾಯಾಳು 32 ಜನರ ಪೈಕಿ 18 ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು 14 ವಿದ್ಯಾರ್ಥಿಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಕೈ, ಕಾಲು ಕಟ್ ಆಗಿದ್ದು, ರಸ್ತೆಯಲ್ಲಿ ಛಿದ್ರ-ಛಿದ್ರವಾಗಿ ಬಿದ್ದಿದೆ. ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದು, ಮಕ್ಕಳ ಪರಿಸ್ಥಿತಿ ನೋಡಿ ಆಕ್ರಂದಿಸುತ್ತಿದ್ದಾರೆ. ಇನ್ನು ಕೆಲವು ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ಮುಖ ತೋರಿಸುವಂತೆ ಪೋಷಕರು ಆಸ್ಪತ್ರೆ ಸಿಬ್ಬಂದಿ ಬಳಿ ಪಟ್ಟು ಹಿಡಿದಿದ್ದಾರೆ.ಇನ್ನು ಅಪಘಾದಲ್ಲಿ ದಾರುಣವಾಗಿ ಸಾವನ್ನಪ್ಪಿದ ಸಮರ್ಥ್(7) ಹಾಗೂ ಶ್ರೀಕಾಂತ್(12) ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಡಿಸಿ ಕೆ.ನಿತೇಶ್ ತಿಳಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ತಲಾ 3 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಯಚೂರು :ಭೀಕರ ಅಪಘಾತಕ್ಕೆ ಬಲಿಯಾದ ಎರಡು ಮಕ್ಕಳು – ಮೂವರ ಸ್ಥಿತಿ ಗಂಭೀರ
Subscribe
Login
0 Comments