ಬಳ್ಳಾರಿ, ಸೆಪ್ಟೆಂಬರ್ 25: ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಯುವಕ/ ಯುವತಿಯರಿಗೆ ಸಿಹಿಸುದ್ದಿಯೊಂದಿದೆ. ಜಿಲ್ಲೆಯಲ್ಲಿ ಮಿನಿ ಉದ್ಯೋಗ ಮೇಳ, ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸ್ವ-ವಿವರ, ಅಗತ್ಯ ಪ್ರಮಾಣ ಪತ್ರಗಳ ಜೊತೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬೇಕು, ತರಬೇತಿಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕರೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 27ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ. ಎಸ್. ಹಟ್ಟಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಮೇಳದಲ್ಲಿ 3 ರಿಂದ 4 ಕಂಪನಿಗಳು ಭಾಗವಹಿಸಲಿದ್ದು, ಇವರು ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳುವರು. ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ-ವಿವರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9742718891, 8277000619, 9900827768, 6360408094ಗೆ ಸಂಪರ್ಕಿಸಬಹುದು.
ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ: ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಆಸಕ್ತರು, ಅರ್ಹರು ಅಭ್ಯರ್ಥಿಗಳು ನಗರದ ಡಾ. ರಾಜ್‌ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟ್ಟದಲ್ಲಿನ ಪ್ರವಾಸೋದ್ಯಮ ಇಲಾಖೆಯ ತಾತ್ಕಾಲಿಕ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 8ರೊಳಗಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಮಾಡುವವರು 10ನೇ ತರಗತಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪೂರ್ಣಗೊಂಡಿದ್ದಲ್ಲಿ ಪದವಿ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರಗಳನ್ನು ಸಲ್ಲಿಸಬೇಕು. ಅರ್ಜಿ ನಮೂನೆ ರೂ.50ಗೆ ದೊರೆಯಲಿದ್ದು, ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಬೇಕು. ಅಪೂರ್ಣ ಹಾಗೂ ಅಸ್ಪಷ್ಟ ಅರ್ಜಿ ತಿರಸ್ಕರಿಸಲಾಗುವುದು. ನಿಗದಿಪಡಿಸಿದ ಅರ್ಹತೆ ಹಾಗೂ ಮಾನದಂಡಗಳನ್ನು ಪೂರೈಸಿದ 50 ಅಭ್ಯರ್ಥಿಗಳಿಗೆ ಪಿಯುಸಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಲಾಗುತ್ತದೆ.
ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆಯಾದ ನಂತರ ತರಬೇತಿಗೆ ನಿಯೋಜಿಸಲಾಗುವುದು. ಅರ್ಜಿ ಸಲ್ಲಿಸುವವರು ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿರಬೇಕು. ಕನಿಷ್ಟ ವಯೋಮಿತಿ 21 ವರ್ಷಗಳು, ಗರಿಷ್ಟ 45 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಧವಾ ಮಹಿಳೆಯರಿಗೆ 48 ವರ್ಷಗಳವರೆಗೆ ವಿನಾಯಿತಿ ಇರುತ್ತದೆ.
ಅಭ್ಯರ್ಥಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರಬಾರದು. ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಯಲ್ಲಿರಬಾರದು. ಪ್ರವಾಸಿ ಮಾರ್ಗದರ್ಶಿ ತರಬೇತಿ ಪಡೆದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರವಾಸೋದ್ಯಮ ಇಲಾಖೆ ಕಾಲಕಾಲಕ್ಕೆ ನೀಡುವ ನಿರ್ದೇಶನ ಹಾಗೂ ಆದೇಶಗಳಿಗೆ ಬದ್ದರಾಗಿರಬೇಕು.