ಕವಿತೆ: ವೇದಾವತಿ ನದಿಯಲ್ಲಿ ಮುಳುಗಿದ ಸೂಳೆ

ಬರಹ: ಬಿ ಟಿ ಲಲಿತಾ ನಾಯಕ್

ನಿಮ್ಮೂರ ಬಸವಿಯರ ‘ಕೊನೆಗಾಲ’ ಹೇಗೋ ನಾನರಿಯೆ
ನಾನು ಕಂಡಿದ್ದನ್ನು ಇಲ್ಲಿ ಮಂಡಿಸುತ್ತಿದ್ದೇನೆ-
ನನ್ನೂರು ಬಲು ಸಣ್ಣದು, 60 ಕ್ಕೆ ಮೀರದ ಹೆಂಚು ಸೋಗೆ
ಅರೆಗೋಡೆ ಅರೆತಡಿಕೆಗಳ ಸಣ್ಣ ದೊಡ್ಡ ಮನೆಗಳು
ಅಷ್ಟು ಸನ್ನೂರೊಳಗೆ ಕಡಿಮೆಯಂದರೂ ಹಿಂದೆ
ಹತ್ತೋ ಹನ್ನೆರಡು ಸೂಳೆಯರು!
ರಾಜಾರೋಷವಾಗಿ ಹಾಡುಹಗಲುಗಳಲ್ಲೂ ಮಿಂಡರಿಗೆ
ಮೈಸುಖ ಉಣಿಸಿ ತಣಿಸಿ,ಬೆಳೆದಿಂಗಳಲ್ಲೂ ಕೊಡೆ
ಅರಳಿಸಿ ಓಡಾಡಿದವರು.

ಪೇಟೆ ಊರುಗಳ ಮೋಜು-ಮೇಜವಾಗಿ ಸವಿದರು
ಊರವರ ಕೊಂಕುಮಾತು ಕುಹಕ ನಗೆಯನ್ನೆಲ್ಲ
ಕುಂಡಿಯಿಂದ ವರೆಸಿಹಾಕಿ, ವಡವೆ-ವಸ್ತ್ರ ದುಡ್ಡು ಕಾಸು
ಸೀರೆ ಕುಪ್ಪುಸದ ರಾಶಿ ಪೇರಿಸಿ ರಾಣಿಯಾಗಿ ಮೆರೆದವರು.

ಎಡಗೈಲಿ ಶರಾಬು ಶೀಸೆ ಬಲಗೈಲಿ ಸಿಗರೇಟು ಹಿಡಿದು
ರಂಗೇರಿ ಕುಣಿದು ಕುಣಿಸಿ ದಣಿಸಿ ಫಾರಿನ್ನರನ್ನೂ
ನಾಚಿಸಿದವರು….
ಎಲ್ಲ ಹೆಂಗಸರಂತೆ ಆ ಸೂಳೆಯರಿಗೂ
ಬಂತು ನೋಡಿ ಒಮ್ಮೆ ಮುದಿತನ:
ಗಳಿಸಿದ್ದೆಲ್ಲ ಅದು ಹೇಗೋ ಯೌವನದ ಜೊತೆಗೇ
ಮಂಗಮಾಯ!
ದಿಕ್ಕಿಲ್ಲ ದೆಸೆಯಿಲ್ಲ ಒಲವಿನ ಬಲವಿಲ್ಲ
ಭೋಗಿಸಿದ್ದ ಮೂಡಿ ಮಿಂಡರು ಸಂಪನ್ನರಲ್ಲಿ ಸಂಪನ್ನರಾಗಿ
‘ಪೂಜ್ಯಶ್ರೀ’ಗಳಾಗಿ ಅಲಾದಿ ಉಳಿದರು

ಈ ಮುದುಕಿಯರಿಗೋ ನೆಲೆ ಇಲ್ಲ ಬೆಲೆ ಇಲ್ಲ
ಕೆದರುತಲೆ ಸೀಕಲು ದೇಹ ಸುಕ್ಕುಮೋರೆ ಗುಳಿಕಣ್ಣು
ಹಸಿವು ದಾರಿದ್ರ್ಯ, ಎಲ್ಲದಕ್ಕೂ ಮೀರಿದ ಸಾಮಾಜಿಕ
ತಿರಸ್ಕಾರ ಬೇರೆ- “ಊರುಜ್ಜಿದೋಳು ಥೂ!”

ಕೊನೆಗಾಲದಲಿ ಕೂಲಿನಾಲಿ ಮಾಡಿ ಗಳಿಸಿದ್ದರಲ್ಲಿ
ಕಡಿಮೆ ತಿಂದು ಹೆಚ್ಚು ಕುಡಿದು ರೋಗರುಜಿನಕ್ಕೆ
ಬಲಿಯಾದವರು ಕೆಲವರು;
ಹಳ್ಳದ ನೆರೆಬಂದಾಗ ಕೊಚ್ಚಿ ಹೋದವಳು
ಪುರಲೆಕಟ್ಟಿಗೆ ಹೊತ್ತು ರೋಡಿನಲ್ಲಿ ಬರುವಾಗ
ರಾಜಧಾನಿಗೆ ಹೊರಟಿದ್ದ ಕೆಂಬಸ್ಸಿನಡಿ ಸಿಕ್ಕಿ ಸತ್ತವಳು
ಜೋಪಡಿಯಲ್ಲಿ ಹಸಿದು ಸತ್ತು ಕೊಳೆತು ನಾತ
ಹರಡಿದ ಮೇಲೆ ಸ್ಮಶಾನಕ್ಕೆ ಸಾಗಿಸಲ್ಪಟ್ಟವಳು
ಊರ ಬಾವಿಗೆ ಹಾರಿ “ಕುಡಿಯೋ ನೀರು ಕೆಡ್ಸಿದಳು ರಂಡೆ!”
ಎಂದು ಬೈಸಿಕೊಂಡವಳು-

ಹೀಗೆ ಸಾಲು ದುರಂತವನ್ನಪ್ಪಿದ ಈ ಮಾಜಿ ಸುಂದರಿಯರ
ಪಾಡುಕಂಡು ಮರುಗಿದವರನು ನಾನು ಕಾಣಲಿಲ್ಲ.
ಸೂಳೆಯಾಗುವುದರಲ್ಲಿ ಸುಖವಿರಬಹುದು ಅಥವ
ಅವರಿಗಿದು ಅನಿವಾರ್ಯವಿದ್ದಿರಬಹುದು (?)
ಆದರೆ ಕೊನೆಗಾಲದ ಆ ಪರಿಣಾಮವೆಷ್ಟು ಘೋರ!

5 1 vote
Article Rating
Subscribe
Notify of
guest
0 Comments
Inline Feedbacks
View all comments