ಬೆಂಗಳೂರು: ‘ಬೆಂಗಳೂರು ನಗರದ ಮುಸ್ಲಿಮ್ ಸಮುದಾಯ ಹೆಚ್ಚಾಗಿ ವಾಸ ಮಾಡುವ ಸ್ಥಳವನ್ನು ‘ಭಾರತವಲ್ಲ, ಪಾಕಿಸ್ತಾನ’ ಎಂದು ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿರುವುದು ನಮಗೆ ಆಘಾತ ಉಂಟುಮಾಡಿದೆ’ ಎಂದು ಸಾಹಿತಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗುರುವಾರ ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ಹೆಸರಿನಲ್ಲಿ ಹಿರಿಯ ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ಧಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರುದ್ರಪ್ಪ ಹನಗವಾಡಿ, ಬಿ. ಶ್ರೀಪಾದ ಭಟ್, ಡಾ.ಮೀನಾಕ್ಷಿ ಬಾಳಿ, ಕೆ. ಎಸ್. ವಿಮಲ ಸೇರಿ ಮತ್ತಿತರ ಸಾಹಿತಿಗಳು ಪ್ರಗತಿಪರರು ಪ್ರಕಟನೆ ಹೊರಡಿಸಿದ್ದಾರೆ. ಸರ್ವಧರ್ಮ ಸಮಭಾವದ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ ನಮ್ಮದು. ಈಗಾಗಲೆ ವಿವಿಧ ರೀತಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವನ್ನೇ ಗುರಿಯಾಗಿಸಿ ನಡೆಸುವ ಹಲವು ದೌರ್ಜನ್ಯಗಳಿಗೆ ದೇಶ ಸಾಕ್ಷಿಯಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಈ ಮುಂಚೆ ಹೈಕೋರ್ಟಿನ ಮತ್ತೊಬ್ಬ ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ಮನುಸ್ಮೃತಿಯು ಆಚಾರ, ವ್ಯವಹಾರ, ಪ್ರಾಯಶ್ಚಿತ್ತ ಬೋಧಿಸುತ್ತದೆ ಎಂದು ಪ್ರಶಂಸೆ ಮಾಡಿದ ಕೆಲವೇ ವಾರಗಳಲ್ಲಿ ಮೇಲಿನ ಕಳವಳಕಾರಿ ಪ್ರಸಂಗ ನ್ಯಾಯಾಂಗದಲ್ಲಿ ವರದಿಯಾಗಿರುವುದು ಅಘಾತಕಾರಿ ವಿದ್ಯಮಾನವಾಗಿದೆ ಎಂದಿದ್ದಾರೆ.
ಹೈಕೋರ್ಟ್ನ ಈ ಪ್ರಕರಣಗಳು ಸೇರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮನೆಯ ವ್ಯಕ್ತಿಗತ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ವಿಡಿಯೋ ಹಂಚಿಕೆಯಾಗುವುದು ಬಹುತ್ವ ಭಾರತದ ಅಡಿಗಲ್ಲು ಸಡಿಲವಾಗುತ್ತಿದೆಯೇನೋ ಎಂಬ ಆತಂಕ ಹುಟ್ಟಿಸಿವೆ. ಇಂತಹ ಸ್ಥಿತಿಗಳ ಮರುಕಳಿಸಲಾರದಂತೆ ಗಮನಹರಿಸುವುದು ಅಗತ್ಯವಿದೆ ಎಂದು ಬಹುತ್ವ ಭಾರತದ ಸಾಂಸ್ಕತಿಕ ನೆಲೆಯಲ್ಲಿ ಬದುಕಲು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.