ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೃದಯಾಘಾತದಿಂದ ಗುರುವಾರ(ಸೆ19) ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಅವರು ಹೊಸಕೋಟೆಯನಿವಾಸದಲ್ಲಿ ನಿಧನ ಹೊಂದಿದ್ದಾರೆ. ಎರಡು ದಿನಗಳ ಹಿಂದೆ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ.
ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಸರಕಾರದ ವಿರುದ್ಧ ಕೆಂಪಣ್ಣ ಅವರು 40% ಕಮಿಷನ್ ಆರೋಪ ಮಾಡಿ ಭಾರೀ ಸುದ್ದಿಯಾಗಿದ್ದರು. ಈ ವಿಚಾರ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ ಮಾಡಿತ್ತು. ಕಾಂಗ್ರೆಸ್ ಆರೋಪವನ್ನೇ ದೊಡ್ಡ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ರಾಜ್ಯಾದ್ಯಂತ ಹೋರಾಟ ನಡೆಸಿತ್ತು. 50 ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಗುತ್ತಿಗೆದಾರರಾಗಿ ಸೇವೆ ಸಲ್ಲಿಸಿದ ಹಿರಿಮೆ ಕೆಂಪಣ್ಣ ಅವರದ್ದಾಗಿದೆ. ನೇರವಾಗಿ ಮಾತನಾಡುವ ಗುಣ ಹೊಂದಿದ್ದ ಕೆಂಪಣ್ಣ ತನ್ನದೇ ಆದ ವರ್ಚಸ್ಸಿನ ಮೂಲಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದರು. ಮೂವರು ಪುತ್ರಿಯರು, ಓರ್ವ ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರು ಬಿಬಿಎಂಪಿ ಗುತ್ತಿಗೆದಾರರ ಸಂಘ, ನೌಕರರ ಸಂಘ ಹಲವು ಸಂಘ ಸಂಸ್ಥೆಗಳು ತೀವ್ರ ಸಂತಾಪ ಸೂಚಿಸಿವೆ.
ನಿರ್ಭೀತ ಧ್ವನಿಯೊಂದನ್ನು ನಾಡು ಕಳೆದುಕೊಂಡಿದೆ
”ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ನಿಧನವಾರ್ತೆ ನೋವುಂಟುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು. ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದ ನಿರ್ಭೀತ ಧ್ವನಿಯೊಂದನ್ನು ನಾಡು ಇಂದು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮಾಡಿದ್ದಾರೆ.