ಇಂಫಾಲ: ಮಣಿಪುರ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಐದು ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುವುದು, ದ್ವೇಷದ ಭಾಷಣ ಮತ್ತು ದ್ವೇಷದ ವಿಡಿಯೊಗಳು ಹರಿದಾಡುವುದನ್ನು ತಡೆಯುವ ಉದ್ದೇಶದಿಂದ ಇಂಟರ್ನೆಟ್ ಸೇವೆಗೆ ನಿರ್ಬಂಧ ಹೇರಿರುವುದಾಗಿ ರಾಜ್ಯ ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ಮೊಬೈಲ್ ಇಂಟರ್ನೆಟ್, ಲೀಸ್ ಲೈನ್ಗಳು, ಬ್ರಾಡ್ಬ್ಯಾಂಡ್ ಮತ್ತು ವಿಪಿಎನ್ ಸಂಪರ್ಕ ಸೇವೆಗಳನ್ನು ಸೆ.10 ರ ಮಧ್ಯಾಹ್ನ 3 ಗಂಟೆಯಿಂದ ಸೆ.15ರ ಮಧ್ಯಾಹ್ನ 3 ಗಂಟೆಯವರೆಗೆ ಸ್ಥಗಿತಗೊಳಿಸಲಾಗುವುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಿಜಿಪಿ ಮತ್ತು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಲು ಪ್ರತಿಭಟನಾಕಾರರು ರಾಜಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ವಿದ್ಯಾರ್ಥಿ ಮತ್ತು ಮಹಿಳಾ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮೂರು ಜಿಲ್ಲೆಗಳಲ್ಲಿ ಮುಂದಿನ ಆದೇಶದವರೆಗೆ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.