ಬೆಂಗಳೂರು: ಗುತ್ತಿಗೆದಾರನಿಗೆ (Contractor) ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜರಾಜೇಶ್ವರಿನಗರದ (Rajarajeshwari Nagar) ಬಿಜೆಪಿ ಶಾಸಕ ಮುನಿರತ್ನ (MLA Munirathna) ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಹೀಗಾಗಿ ಪೊಲೀಸರು ಪ್ರಕರಣದ ಕುರಿತು ತನಿಖೆಯನ್ನು ಚುರುಕುಗೊಳಿಸಲಿದ್ದಾರೆ ಎನ್ನಲಾಗಿದೆ.
ಇಂದು ಪೊಲೀಸರಿಂದ ತನಿಖೆ :ಇಂದು ಮುನಿರತ್ನರನ್ನ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಇದಾದ ಬಳಿಕ ಮುನಿರತ್ನ ಅವರ ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಸಂಗ್ರಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಾಯ್ಸ್ ಸ್ಯಾಂಪಲ್ ಸಂಗ್ರಹಿಸಿ ಎಫ್ಎಸ್ಎಲ್ಗೆ ರವಾನಿಸಿ ಬಳಿಕ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ. ಭಾನುವಾರ ಶೇಷಾದ್ರಿಪುರಂ ಉಪವಿಭಾಗ ಎಸಿಪಿ ಪ್ರಕಾಶ್ ಅವರು ಜಾತಿ ನಿಂದನೆ ಸಂಬಂಧ ಮುನಿರತ್ನ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಎಸಿಪಿ, ಇಂದು ಕೂಡ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಿದ್ದಾರೆ ಎಂದು ಹೇಳಲಾಗಿದೆ.
ಒಂದು ವಾರಗಳ ಕಾಲ ಕಸ್ಟಡಿಗೆ ಕೇಳಿದ್ದ ಪೊಲೀಸರು ಒಂದು ವಾರ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಆದರೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ 2 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶ ನೀಡಿದರು. ನ್ಯಾಯಧೀಶರ ಮುಂದೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ.
ಮಂಕಾದ ಬಿಜೆಪಿ ಶಾಸಕ
ಇನ್ನು ಇಡೀ ಪ್ರಕ್ರಿಯೆ ವೇಳೆ ಶಾಸಕ ಮುನಿರತ್ನ ಮಂಕಾಗಿ, ಮೌನಕ್ಕೆ ಶರಣಾಗಿದ್ದು ಕಂಡು ಬಂತು. ಪೊಲೀಸರ ಬಂಧನದ ಬೆನ್ನಲೆ ಮಂಕಾದ ಶಾಸಕ ಮುನಿರತ್ನ ನಿನ್ನೆ ಸಂಜೆಯಿಂದ ಮಾತಿಲ್ಲ- ಕತೆಯಿಲ್ಲ ಎನ್ನುವಂತೆ ಇದ್ದಾರೆ. ಕೋಲಾರದಲ್ಲಿ ವಶಕ್ಕೆ ಪಡೆದು ಅಶೋಕನಗರ ಠಾಣೆಗೆ ಕರೆತಂದು ರಾತ್ರಿ ವಿಚಾರಣೆ ನಡೆಸಿದರು. ಶನಿವಾರ ರಾತ್ರಿ 10.30 ರಿಂದ 1.30 ರವರೆಗೆ ತನಿಖಾಧಿಕಾರಿ ಎಸಿಪಿ ಪ್ರಕಾಶ್ ರಿಂದ ಶಾಸಕ ಮುನಿರತ್ನ ವಿಚಾರಣೆ ನಡೆದಿದೆ. ಈ ವೇಳೆ ತನಿಖಾಧಿಕಾರಿಗಳ ಪ್ರಶ್ನೆಗೆ ನಾನೇನು ಮಾಡಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಉತ್ತರ ನೀಡಿದ್ದಾರೆ.
ಏನಿದು ಪ್ರಕರಣ?
ಬಿಜೆಪಿ ಶಾಸಕ ಮುನಿರತ್ನ ಮತ್ತು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವವರ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಗುತ್ತಿಗೆದಾರನಿಂದ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪದಡಿ ವಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಶಾಸಕ ಮುನಿರತ್ನ ಅವರು ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದ ವೇಳೆ ಕೋಲಾರದ ಗಡಿಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು, ಶಾಸಕರ ಕಾರನ್ನು ಚೇಸ್ ಮಾಡಿದ ಪೊಲೀಸರು ಕಾರು ಅಡ್ಡಗಟ್ಟಿ ಅವರನ್ನು ಬಂಧಿಸಿದ್ದರು