ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ದ ಆಯ್ದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಹಾಗೂ ಬಸ್ ಚಾಲಕ, ನಿರ್ವಾಹಕರ ಆರೋಗ್ಯದ ದೃಷ್ಟಿಯಿಂದ “ನಮ್ಮ ಕ್ಲಿನಿಕ್’ಗಳನ್ನು ಶೀಘ್ರವೇ ತೆರೆಯಲು ರಾಜ್ಯ ಸರಕಾರವು ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಹಿಂದಿನ ಸರಕಾರ ನಗರ ಭಾಗದಲ್ಲಿ “ನಮ್ಮ ಕ್ಲಿನಿಕ್’ಗಳನ್ನು ತೆರೆದಿದ್ದು, ಅವು ಯಶಸ್ವಿ ಯಾಗಿ ಕಾರ್ಯನಿರ್ವಹಿಸುತ್ತಿವೆ. ತಾಲೂಕು, ಜಿಲ್ಲಾಸ್ಪತ್ರೆಗಳ ಮೇಲಿನ ಒತ್ತಡವನ್ನು ಅವು ಕಡಿಮೆ ಮಾಡಿವೆ. ಹೀಗಾಗಿ ರಾಜ್ಯಾದ್ಯಂತ ಇನ್ನಷ್ಟು ಕ್ಲಿನಿಕ್‌ಗಳನ್ನು ಆರಂಭಿಸಲು ನಿರ್ಧರಿಸಿ, ಪ್ರತೀ ಜಿಲ್ಲೆಗೆ ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ “ನಮ್ಮ ಕ್ಲಿನಿಕ್’ಗಳನ್ನು ತೆರೆದರೆ ಸಾರ್ವಜನಿಕರಿಗೆ, ಶಾಲಾ- ಕಾಲೇಜು ಮಕ್ಕಳಿಗೆ ಹಾಗೂ ನಿಗಮದ ಚಾಲಕ, ನಿರ್ವಾಹಕರಿಗೆ ಹೆಚ್ಚು ಅನುಕೂಲಕರ ಎಂಬ ದೃಷ್ಟಿಯಿಂದ ರಾಜ್ಯದ ಆರೋಗ್ಯ ಇಲಾಖೆಯು ನಿಗಮದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿವೆ. ಬೆಳಗ್ಗೆ 9.30ರಿಂದ ಸಂಜೆ 4ರ ವರೆಗೆ “ನಮ್ಮ ಕ್ಲಿನಿಕ್’ಗಳು ಹೊರ ರೋಗಿ ವಿಭಾಗವಾಗಿ ಕಾರ್ಯ ನಿರ್ವಹಿಸಲಿವೆ. ನಿಲ್ದಾಣಕ್ಕೆ ಬರುವ ಸ್ಥಳೀಯ ಹಾಗೂ ದೂರದ ಪ್ರಯಾಣಿಕರಿಗೆ ಅಗತ್ಯವಾದ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಸಕಾಲದಲ್ಲಿ ಮಾಡಲಾಗುತ್ತದೆ.
ವಿಶೇಷವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಅಸಾಂಕ್ರಾಮಿಕ ರೋಗಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ “ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುವಂತೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.ಬಸ್ ನಿಲ್ದಾಣ ಜನರ ಸಂಪರ್ಕ ಕೊಂಡಿ ನಿಗಮದ ಬಸ್ ನಿಲ್ದಾಣಗಳು ಪ್ರತೀ ನಿತ್ಯ ದೊಡ್ಡ ಸಂಖ್ಯೆಯ ಜನರ ಸಂಪರ್ಕ ಸಾಧಿಸುವ ಕೊಂಡಿಯಾಗಿದ್ದು, ನಿಲ್ದಾಣಕ್ಕೆ ಬರುವ ಅಸಂಖ್ಯಾಕ ಕೂಲಿ ಕಾರ್ಮಿಕರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ “ನಮ್ಮ ಕ್ಲಿನಿಕ್’ಗಳಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
ರಾಜ್ಯಾದ್ಯಂತ “ನಮ್ಮ ಕ್ಲಿನಿಕ್’ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚು ಜನದಟ್ಟಣೆ ಉಂಟಾಗುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಗಳಲ್ಲಿಯೂ “ನಮ್ಮ ಕ್ಲಿನಿಕ್’ಗಳನ್ನು ತೆರೆಯಲು ಆರೋಗ್ಯ ಇಲಾಖೆಯಿಂದ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಇಲಾಖೆಯು ಕೆಎಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದೆ.