Breaking: KPSC ಪರೀಕ್ಷೆ ದಿಢೀರ್‌ ಮುಂದೂಡಿಕೆ

ಕರ್ನಾಟಕ ಲೋಕಸೇವಾ ಆಯೋಗವು (KPSC) ಪರೀಕ್ಷಾರ್ಥಿಗಳಿಗೆ ಶಾಕ್‌ ನೀಡಿದೆ. ನಾಳೆ ನಡೆಯಬೇಕಿದ್ದ ಗ್ರೂಪ್ ಬಿ ಪರೀಕ್ಷೆಗಳನ್ನು ಮುಂದೂಡಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಿದೆ.ರಾಜ್ಯ ಸರ್ಕಾರವು ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ನಾಳೆಯಿಂದ ನಡೆಯಬೇಕಿದ್ದ ಕೆಪಿಎಸ್‌ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಿರುವುದಾಗಿ ತಿಳಿಸಿದೆ.ಸರ್ಕಾರದ ಹೊಸ ಆದೇಶದಿಂದ ಎಲ್ಲ ಹುದ್ದೆಗಳಿಗೂ ವಯೋಮಿತಿಯ ಸಡಿಲಿಕೆಯು ಅನ್ವಯವಾಗಲಿದೆ. ಹಾಗಾಗಿ ನಾಳೆ ನಡೆಯಬೇಕಿದ್ದ ಕಡ್ಡಾಯ ಕನ್ನಡ ಹಾಗೂ ಭಾನುವಾರ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೊನೇ ಕ್ಷಣದಲ್ಲಿ ಮುಂದೂಡಿದೆ. ಕೆಪಿಎಸ್‌ಸಿಯ ಈ ದಿಢೀರ್‌ ನಿರ್ಧಾರದಿಂದ ನಾಳೆ ಪರೀಕ್ಷೆ ಬರೆಯಲು ಸಜ್ಜಾಗಿದ್ದ ಅಭ್ಯರ್ಥಿಗಳಿಗೆ ಶಾಕ್‌ ನೀಡಿದಂತಾಗಿದೆ.

ಕೆಪಿಎಸ್‌ಸಿ ಹೇಳಿದ್ದೇನು?: ನಾಳೆ ನಡೆಯಬೇಕಿದ್ದ ಕೆಪಿಎಸ್​ಸಿಯ ವಿವಿಧ ಗ್ರೂಪ್-ಬಿ ಹುದ್ದೆಗಳ ಪರೀಕ್ಷೆ ಮುಂದೂಡಲಾಗಿದೆ. ಸೆಪ್ಟೆಂಬರ್‌ 14 ಮತ್ತು 15ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳ ಹಂಚಿಕೆ ಕೂಡ ಮಾಡಲಾಗಿತ್ತು.

ಆದರೆ, ಕರ್ನಾಟಕ ಸರ್ಕಾರ ಇತ್ತೀಚೆಗೆ ತನ್ನ ನಡಾವಳಿಗಳಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಸಲಕ್ಕೆ ಅನ್ವಯಿಸುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಿ ಆದೇಶ ಹೊರಡಿಸಿದೆ.

ಈ ಕಾರಣದಿಂದ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಎಲ್ಲ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಲಾಗುತ್ತಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿದೆ. ಹಾಗಾಗಿ ಪರೀಕ್ಷೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಮುಂದಿನ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಅಭ್ಯರ್ಥಿಗಳಿಂದ ಖಂಡನೆ: ಕೆಪಿಎಸ್‌ಸಿಯ ಈ ದಿಢೀರ್‌ ನಿರ್ಧಾರದಿಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ಈ ಪೋಸ್ಟ್‌ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ. ʼನಿನ್ನೆ ಒಂದೇ ದಿವಸದಲ್ಲಿ PSI ಪರೀಕ್ಷೆಯನ್ನು 2 ಬಾರಿ ಮುಂದೂಡಿ ಗಿನ್ನಿಸ್ ದಾಖಲೆಯಾಗಿದೆ. ಈಗ ಮತ್ತೊಂದು KPSC ಪರೀಕ್ಷೆ ಮುಂದೂಡಿಕೆಯಾಗಿದೆ. ಗೊತ್ತು ಗುರಿಯಿಲ್ಲದ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ, ಈಗ ಅನುಭವಿಸುತ್ತಿದ್ದೇವೆ. ಕನ್ನಡಿಗ ಯುವಕರ ಕನಸು, ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರʼ ಎಂದು ಬರೆದುಕೊಂಡಿದ್ದಾರೆ. ಪರೀಕ್ಷೆಗೆ ಒಂದು ದಿನ ಇದೆ ಎನ್ನುವಾಗ KPSC ಪರೀಕ್ಷೆ ಮುಂದೂಡಿದೆ. ಬೆಂಗಳೂರಿನಲ್ಲಿ ಓದುತ್ತಿದ್ದ, ಉತ್ತರ ಕರ್ನಾಟಕದ ಅಭ್ಯರ್ಥಿಗಳು ರೈಲು ಟಿಕೆಟ್‌ ಬುಕ್‌ ಮಾಡಿಕೊಂಡವರು, ಈಗಾಗಲೇ ಊರುಗಳಿಗೆ ತಲುಪಿರುವವರ ಕಥೆ ಏನಾಗಬೇಕು?ʼ ಎಂದು ಆಕ್ರೋಶ ಹೊರಹಾಕಿದ್ದಾರೆ. KPSCಯ ಈ ದಿಢೀರ್‌ ನಿರ್ಧಾರವು ಪರೀಕ್ಷೆ ಬರೆಯಲು ಸಜ್ಜಾಗಿದ್ದ ಅಭ್ಯರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

See also  ವಾಲ್ಮೀಕಿ ನಿಗಮ ಹಗರಣ : ಇಂದು ಬಿ.ನಾಗೇಂದ್ರ ಭವಿಷ್ಯ ನಿರ್ಧಾರ!
0 0 votes
Article Rating
Subscribe
Notify of
guest
0 Comments
Inline Feedbacks
View all comments