ಅರ್ಜಿ ವಜಾ: ಹೈಕೋರ್ಟ್ ಆದೇಶದ ಬಗ್ಗೆ ಸುದೀರ್ಘ ಮಾಧ್ಯಮ ಪ್ರಕಟಣೆ ನೀಡಿದ ಸಿಎಂ

ಬೆಂಗಳೂರು: ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದ ಕುರಿತು ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ಮಾಧ್ಯಮ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ ಎಂದಿದ್ದಾರೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್‌ಎಸ್‌ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು. ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್‌ಎಸ್‌ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ. ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ.

ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು, ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ. ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.

ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ. ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ಮನವಿ ಮಾಡುತ್ತೇನೆ. ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

See also  ರತನ್ ಟಾಟಾ ಇನ್ನಿಲ್ಲ

ಇದೇ ಬಿಜೆಪಿ, ಜೆಡಿಎಸ್ ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ. ಇಂದು ನನ್ನ ವಿರುದ್ಧ ರಾಜಕೀಯ ಸಂಚು ನಡೆಸುತ್ತಿರುವ ಇದೇ ನಾಯಕರು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು. ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ. ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ ಎಂದು ಗುಡುಗಿದ್ದಾರೆ.

0 0 votes
Article Rating
Subscribe
Notify of
guest
0 Comments
Inline Feedbacks
View all comments