ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಮತ್ತೊಮ್ಮೆ (POCSO Case) ಸಂಕಷ್ಟ ಎದುರಾಗಿದೆ. ಈ ಹಿಂದೆ ಬಿಎಸ್‌ವೈ ವಿರುದ್ಧ ದಾಖಲಾಗಿ ತಣ್ಣಗಾಗಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ (Sexual Harassment) ಪೋಕ್ಸೋ ಪ್ರಕರಣ ಮತ್ತೊಮ್ಮೆ ಮರುಜೀವ ಪಡೆದಿದೆ.
ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಮತಾ ಸಾವಿನ ವಿಚಾರದ ಬಗ್ಗೆ ರಾಜ್ಯ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಈ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ರಾಜ್ಯ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷ್ಮೀ ಚೌಧರಿ ಆಗ್ರಹ ಮಾಡಿದ್ದು, ಆದಷ್ಟು ಬೇಗ ತನಿಖಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಕೋರಿಕೊಂಡಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಮತಾ ಸಾವು ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಳೆದ 2024ರ ಮಾರ್ಚ್ 15ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಅಚ್ಚರಿಯ ಸಂಗತಿ ಎಂದರೆ ಬಿಎಸ್‌ವೈ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದ ಬಾಲಕಿಯ ತಾಯಿ ಮಾರ್ಚ್ 27ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಉಸಿರಾಟದ ತೊಂದರೆಗೆ ಒಳಗಾಗಿ ಹುಳಿಮಾವು ಬಳಿಯ ನ್ಯಾನೋ ಖಾಸಗಿ ಆಸ್ಪತ್ರೆಗೆ ಮಾರ್ಚ್ 26ರ ರಾತ್ರಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಆಕೆಗೆ ಕೂಡಲೇ ವೈದ್ಯರು ತಪಾಸಣೆ ನಡೆಸಿದ್ದರು. ತಪಾಸಣೆ ವೇಳೆ ಸ್ಯಾಚುರೇಷನ್ ಲೇವೆಲ್ ಲೋ ಆಗಿತ್ತು. ಕೂಡಲೇ ವೈದ್ಯರಿಂದ ಚಿಕಿತ್ಸೆ ಆರಂಭಿಸಲಾಗಿತ್ತು. ಅಲ್ಲದೆ ವೆಂಟಿಲೇಟರ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿತ್ತು. ಅಷ್ಟೊತ್ತಿಗೆ ಮೋಷನ್‌ಗೆ ಹೋಗಬೇಕು ಎಂದು ದೂರುದಾರೆ ಮಮತಾ ಹೇಳಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ನಿತ್ರಾಣಗೊಂಡು ಸಾವನ್ನಪ್ಪಿದ್ದಾರೆ ಎಂದು ನ್ಯಾನೋ ಆಸ್ಪತ್ರೆ ಮೂಲಗಳು ತಿಳಿಸಿದ್ದವು.
ಪೋಕ್ಸೋ ಎಫ್‌ಐಆರ್‌ನಲ್ಲಿ ಏನಿದೆ?
ದೂರುದಾರರು ತಿಳಿಸಿರುವಂತೆ ತಾಯಿ ಮತ್ತು ಮಗಳು ಕಳೆದ ಫೆಬ್ರವರಿ 2ರಂದು ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದರು. ಅತ್ಯಾಚಾರ ಪ್ರಕರಣದಲ್ಲಿ ನಮಗೆ ಅನ್ಯಾಯವಾಗಿದೆ ವಿಶೇಷ ತನಿಖಾ ತಂಡ ರಚಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತೆ ಹಾಗೂ ಸಂತ್ರಸ್ತೆಯ ತಾಯಿ ಮನವಿ ಮಾಡಲು ಬಿಎಸ್‌ವೈ ಮನೆಗೆ ತೆರಳಿದ್ದರು. ಆ ವೇಳೆ ಬಿಎಸ್ ಯಡಿಯೂರಪ್ಪನವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದಲ್ಲದೇ ಬಳಿಕ ಯಡಿಯೂರಪ್ಪನವರು ಕ್ಷಮೆಯಾಚಿಸಿ, ಪ್ರಕರಣದಲ್ಲಿ ನಿಮಗೆ ಸಹಾಯ ಮಾಡುತ್ತೇನೆ, ಈ ಘಟನೆ ಬಗ್ಗೆ ಹೊರಗಡೆ ಎಲ್ಲೂ ಮಾತನಾಡಬಾರದು ಎಂದು ಹೇಳಿರುತ್ತಾರೆ ಎಂದು ಸಂತ್ರಸ್ತೆಯ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 2ನೇ ತಾರೀಖು, ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಸಹಾಯ ಕೇಳಲು ಹೋಗಿದ್ದಾಗ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.